ಮಿದುಳು	
ನರಮಂಡಲದ ಅತಿಮುಖ್ಯಭಾಗ (ಬ್ರೆಯ್ನ್). ನರಮಂಡಲದಲ್ಲಿ ಕೇಂದ್ರ (ಸೆಂಟ್ರಲ್) ಮತ್ತು ಪರಿಧಿ (ಪೆರಿಫೆರಲ್) ಎಂಬ ಎರಡು ಭಾಗಗಳಿವೆ. ಮಿದುಳು ಮತ್ತು ಮಿದುಳುಬಳ್ಳಿ ಇವೆರಡೂ ಸೇರಿ ಕೇಂದ್ರ ನರಮಂಡಲವಾಗಿದೆ. ದೇಹದ ವಿವಿಧಭಾಗಗಳಲ್ಲಿರುವ ನರಗಳು ಹಾಗೂ ನರಗಂತಿಗಳು (ಗ್ಯಾಂಗ್ಲಿಯ) ಪರಿಧಿ ನರಮಂಡಲ.

	ಮಿದುಳು ಒಂದು ದೊಡ್ಡ ಅಂಗ. ಬೆಣ್ಣೆಯಂಥ ಮಿದುವಾದ ಘನವಸ್ತುವಾಗಿದ್ದು ತಲೆಬುರುಡೆಯ ಒಳಗೆ ಸುರಕ್ಷಿತವಾಗಿದೆ. ಸಂಘಟ್ಟನೆ ಇತ್ಯಾದಿಗಳಿಂದ ಬುರುಡೆ ಒಡೆಯದೆ ಇದ್ದರೂ ರಭಸವಾಗಿ ಕುಲುಕಿದಂತಾಗುವುದರಿಂದ ಮಿದುಳಿಗೆ ಧಕ್ಕೆ ಆಗಿ ಜ್ಞಾನ ತಪ್ಪಬಹುದು, ಮನೋವಿಕಾರ ಆಗಬಹುದು, ಪ್ರಾಣವೇ ಹೋಗಬಹುದು. ಆದರೆ ಇಂತ ಸಂಭವಗಳು ಕಡಿಮೆ ಎಂದೇ ಹೇಳುವಷ್ಟು ರಕ್ಷಣೆ ಮಿದುಳಿಗೆ ಲಭಿಸಿದೆ.

	ವಯಸ್ಕ ವ್ಯಕ್ತಿಯಲ್ಲಿ ಮಿದುಳಿನ ತೂಕ 1300-1400 ಗ್ರಾಮ್ ಇರುವುದು. 1200 ಗ್ರಾಮ್‍ಗಳಿಗಿಂತ ಕಡಿಮೆ ಇದ್ದರೆ ಆ ವ್ಯಕ್ತಿ ದಡ್ಡ. ಅಂದ ಮಾತ್ರಕ್ಕೆ ಮಿದುಳಿನ ತೂಕದ ಮೇಲೆಯೇ ಬುದ್ಧಿವಂತಿಕೆ ಆಧರಿಸಿಲ್ಲ. ಉದಾಹರಣೆಗೆ ಆನೆಯ ಮಿದುಳಿನ ತೂಕ 3-4 ಕೆಜಿ ಆದರೂ ಆನೆ ಮಾನವನ ಹಾಗೆ ವಿದ್ಯೆ ಕಲಿಯಲಾರದು. ಅದರ ದೇಹದ ಗಾತ್ರಕ್ಕೆ ಅನುರೂಪವಾಗಿ ಮಿದುಳೂ ಬೆಳೆದಿದೆ ಅಷ್ಟೆ. ಅಲ್ಲದೆ 1400 ಗ್ರಾಮ್ ತೂಕದ ಮಿದುಳುಳ್ಳ ವ್ಯಕ್ತಿ 1300 ಗ್ರಾಮ್ ತೂಕದ ಮಿದುಳಿನವನಿಗಿಂತ ಬುದ್ಧಿವಂತನಾಗಿರುವುದು ಖಾತರಿ ಇಲ್ಲ. ಬುದ್ಧಿವಂತಿಕೆ ಮಿದುಳಿನ ಅಂತರಿಕ ಕಣಗಳನ್ನು ನರಜಾಲಗಳನ್ನು ಆಧರಿಸಿದೆ.

	ಭ್ರೂಣದಲ್ಲಿ ಮೊತ್ತಮೊದಲಾಗಿ ಮಿದುಳು ನಾಳಾಕಾರವಾಗಿ ಉದ್ಭವಿಸುತ್ತದೆ. ತಲೆಯಲ್ಲಿ ಇದು ದೊಡ್ಡದಾಗಿ ಮತ್ತು ಜಟಿಲ ರಚನೆಯದಾಗಿ ವಿಕಸಿಸಿ ಮಿದುಳಾಗುತ್ತದೆ ಮತ್ತು ನಾಳದ ಮಿಕ್ಕ ವಿಕಸಿತ ಭಾಗಗಳ ಮೇಲೆ ಹತೋಟಿ ಪಡೆಯುತ್ತದೆ. ಭ್ರೂಣದ ಬೆಳೆವಣಿಗೆ ಘಟ್ಟಗಳು ಪ್ರಾಣಿರಾಜ್ಯದ ವಿಕಾಸ ಮಾರ್ಗದ ಘಟ್ಟಗಳ ಪುನರಾವರ್ತನೆ ತಾನೆ. ಭ್ರೂಣದಲ್ಲಿ ಹಾಗೂ ಪ್ರಾಣಿರಾಜ್ಯ ಕಂಡುಬರುವ ಮಿದುಳಿನ ಹಿರಿಮೆಗೆ ಮಸ್ತಿಷ್ಕೀಕರಣ (ಎನ್ಸೆಫಲೈಸೇಷನ್) ಎಂದು ಹೆಸರು.

	ಭ್ರೂಣದ ಮಿದುಳು ಶೀಘ್ರವಾಗಿಯೇ ಮುಮ್ಮಿದುಳು (ಪೋರ್‍ಬ್ರೆಯ್ನ್). ನಡು ಮಿದುಳು (ಮಿಡ್‍ಬ್ರೆಯ್ನ್) ಮತ್ತು ಹಿಮ್ಮಿದುಳು (ಹೈಂಡ್‍ಬ್ರೆಯ್ನ್) ಎಂದು ಸ್ಧೂಲವಾಗಿ ವಿಭಾಗವಾಗುತ್ತದೆ. ಮುಮ್ಮಿದುಳು ಮುಖ್ಯವಾಗಿ ಮಹಾಮಸ್ತಿಷ್ಕ ಮತ್ತು ಥÉಲಮಸ್ ಎಂಬ ಎರಡು ಭಾಗಗಳಾಗಿ ರೂಪುಗೊಳ್ಳುತ್ತದೆ. ಎರಡೂ ಎಡ ಹಾಗೂ ಬಲಾರ್ಧಗಳಾಗಿದ್ದು ನಡುಮಧ್ಯದಲ್ಲಿ ಎರಡಕ್ಕೂ ಎರಡು ಅರ್ಧಗಳೂ ಕೂಡಿಕೊಂಡಿವೆ. ಮಹಾಮಸ್ತಿಷ್ಕದಲ್ಲಿ ಸಾಮಾನ್ಯ ಇಂದ್ರಿಯಗಳು (ನೋವು, ಶೀತೋಷ್ಣ, ಸ್ಪರ್ಶ, ಕಂಪನ ಹಾಗೂ ಒತ್ತಡ) ಮತ್ತು ವಿಶೇಷ ಇಂದ್ರಿಯಗಳು (ದೃಷ್ಟಿ, ಶ್ರವಣ, ಘ್ರಾಣ ಮತ್ತು ರುಚಿ) ಇವು ಅನುಭವಕ್ಕೆ ಬರುತ್ತವೆ. ಅಲ್ಲದೆ ಅವಕ್ಕೆ ಅರ್ಥವತ್ತಾದ ಪ್ರತಿಕ್ರಿಯಾ ಕರ್ಮಗಳು ರೂಪಿತವಾಗಿ ಐಚ್ಫಿಕ ಚಲನೆಗಳೂ ಜರಗುತ್ತವೆ. ಥÉಲಮಸ್ಸಿನಲ್ಲೂ ಇದೇ ರೀತಿ ಸಂವೇದನಗ್ರಹಣ ಹಾಗೂ ಅನುರೂಪ ಪ್ರತಿಕ್ರಿಯೆ ಕಂಡುಬಂದರೂ ಇವು ಮನೋಗೋಚರವಲ್ಲ ಐಚ್ಫಿಕ ಚಲನೆಯೂ ಅಲ್ಲ. ನಡುಮಿದುಳಿನಲ್ಲಿ ಅಗಾಧ ವಿಕಸನ ಕಾಣಬರುವುದಿಲ್ಲ. ಅದು ಮುಖ್ಯವಾಗಿ ದೃಷ್ಟಿಗೆ ಸಂಬಂಧಪಟ್ಟ ಅನೈಚ್ಛಿಕ ಪ್ರತಿಕ್ರಿಯೆಗಳಿಗೆ ಮಾತ್ರ ಮೀಸಲು. ಹಿಮ್ಮಿದುಳು ವಿಕಸನದ ಪ್ರಾರಂಭಹಂತದಲ್ಲಿ ದೇಹದ ಸಮತೂಕ ರಕ್ಷಣೆಗೆ ಕಾರಣವಾಗಿದ್ದರೂ ಕ್ರಮೇಣ ಹೃದಯಮಿಡಿತ ಉಸಿರಾಟ ಮುಂತಾದ, ಅನೈಚ್ಫಿಕ ಮರ್ಮಕ್ರಿಯೆಗಳಿಗೆ (ವೈಟಲ್) ನಿಯಂತ್ರಣ ಸ್ಧಾನವಾಗಿ ರೂಪಿತಗೊಳ್ಳುತ್ತದೆ. ಈ ಭಾಗಗಳ ಸ್ಧೂಲ ವಿವರಗಳನ್ನು ಮುಂದೆ ಬರೆದಿದೆ.

	ಮಹಾಮಸ್ತಿಷ್ಕ (ಸೆರಿಬ್ರಮ್): ಇದನ್ನು ಪ್ರಧಾನ, ಹಿರಿಯ ಅಥವಾ ಗುರು ಮಸ್ತಿಷ್ಕ ಎನ್ನುವುದುಂಟು. ಇದು ಮಿದುಳಿನ ಭಾಗಗಳಲ್ಲೆಲ್ಲ ಅತಿದೊಡ್ಡದು. ಇದರ ಅರ್ಧವನ್ನು ಗೋಳಾರ್ಧವೆಂದು ಹೇಳುವುದಿದೆಯಾದರೂ ಇಡೀ ಮಹಾಮಸ್ತಿಷ್ಕ ಅಂಡಾಕಾರವಾಗಿದೆ ಮತ್ತು ಅದೇ ಆಕಾರದ ಬುರುಡೆ ಒಳಗಿನ ಹೆಚ್ಚು ಭಾಗವನ್ನು ಆಕ್ರಮಿಸಿದೆ. ಹಿಂದಿನ ತುದಿಯಿಂದ (ಆಕ್ಸಿಪೀಟಲ್ ಪೋಲ್) ಮುಂದಿನ ತುದಿಯ ವರೆಗೂ (ಫ್ರಾಂಟಲ್ ಪೋಲ್) ಆಕ್ರಮಿಸಿರುವ ಆಳವಾದ ಒಂದು ಸೀಳು (ಮೀಡಿಯನ್ ಸಲ್ಕಸ್) ಎಡಬಲ ಗೋಳಾರ್ಧಗಳನ್ನು ಬಲುಮಟ್ಟಿಗೆ ಬೇರ್ಪಡಿಸಿದೆ ಆದರೆ ಸೀಳಿನ ತಳದಲ್ಲಿ ಗೋಳಾರ್ಧಗಳನ್ನು ಕೂಡಿಸುವ ಅಡ್ಡತಂತುಗಳ ಸೇತು (ಕಾರ್ಪಸ್ ಕಲೋಸಮ್) ಇದೆ. ಪ್ರತಿಯೊಂದು ಗೋಳಾರ್ದದಲ್ಲೂ ವಕ್ರವಾದ ಹಳ್ಳ, ದಿಣ್ಣೆಗಳಿರುವ (ನುಲಿಕೆ) ಹೊರಬೂದು ಬಣ್ಣದ ವಸ್ತು (ಗ್ರೇಮ್ಯಾಟರ್) ಇದೆ ಇದನ್ನು ಸಿಪ್ಪೆ. ವಲಯ, ಕರಟ, ಕವಚ (ಕಾರ್ಟೆಕ್ಸ್) ಎಂದು ಮುಂತಾಗಿ ವಿವರಿಸುವುದಿದೆ. ಇದರಲ್ಲಿ ಲಕ್ಷಾಂತರ ನರಕಣಗಳು ವಿಶಿಷ್ಟ ವಿನ್ಯಾಸಗಳಾಗಿ ತುಂಬಿಕೊಂಡು ಪರಸ್ಪರ ಸಂಪರ್ಕಗಳ ಮೂಲಕ ಸಂಬಂಧಿತವಾಗಿದ್ದು ಮಿದುಳಿನ ಇತರ ಭಾಗಗಳೊಡನೆ ಮತ್ತು ಮಿದುಳು ಬಳ್ಳಿಯೊಡನೆ ಲಕ್ಷಾಂತರ ನರತಂತುಗಳಿಂದ ಸಂಪರ್ಕಿತವಾಗಿರುತ್ತವೆ. ಬೂದು ವಸ್ತುವಿನ ಅಡಿಯಲ್ಲಿ ಬಿಳಿವಸ್ತು (ಹ್ವೈಟ್ ಮ್ಯಾಟರ್) ಇದೆ. ಮಹಾಮಸ್ತಿಷ್ಕವನ್ನು ಇತರ ಕಡೆಗಳಿಗೆ ಸಂಪರ್ಕಿಸುವ ನರತಂತುಗಳು ಇದರ ಮೂಲಕ ಹಾಯುತ್ತವೆ. ಬಿಳಿಬಣ್ಣದ ಈ ನರತಂತುಗಳಿಂದಲೇ ಪ್ರಧಾನವಾಗಿ ಬಿಳಿ ವಸ್ತುರಚಿತವಾಗಿದೆ. ಈ ನರತಂತು ಕಂತೆಗಳ ನಡುವೆ ಅಲ್ಲಲ್ಲಿ ಗುಂಬಗಳನ್ನೂ ಗೆರೆ ಕಾಯವನ್ನೂ (ನ್ಯೂಕ್ಲಿಯೈ, ಕಾರ್ಪಸ್ ಸ್ಟ್ರೈಯೇಟಮ್) ಗುರುತಿಸಬಹುದು. ಕೆಳದರ್ಜೆ ಪ್ರಾಣಿಗಳಲ್ಲಿ ವಾಸನೆಗೆ ಮೀಸಲಾಗಿರುವ ಮಸ್ತಿಷ್ಕ ಭಾಗ (ರ್ಹೈನನ್‍ಸೆಫಲಾನ್) ಪ್ರಧಾನವಾಗಿದೆ, ಹಿಂದು ಮುಂದಾಗಿ ಪಸರಿಸಿರುವ ಪ್ರಧಾನ ಸೀಳಿನ ಜೊತೆಗೆ ಇನ್ನೂ ಕೆಲವು ಸೀಳುಗಳು ಆಳವಾಗಿಯೇ ಇದ್ದು ಪ್ರತಿಯೊಂದು ಗೋಳಾರ್ಧದ ಬೂದುವಸ್ತುವನ್ನು ಮುಂದಿನ ಪಕ್ಕದ ಹಿಂದಿನ, ಕೆಳಗಿನ ಮುಂತಾದ ಹಾಳೆಗಳಾಗಿ ವಿಂಗಡಿಸಿದೆ. ಮುಂದಿನ (ಹಣೆ) ಹಾಲೆಗೂ ಕೆಳಗಿನ ಹಾಲೆಗೂ ನಡುವೆ ಇರುವ ಸೀಳಿನ ಆಳದ ಅಡಿಯಲ್ಲಿ ಬೂದುವಸ್ತು ಇದೆ. ಇದಕ್ಕೆ ರೀಲನದ್ವೀಪ (ಐಲೆಂಡ್ ಆಫ್ ರೀಲ್) ಎಂದು ಹೆಸರು. ಸುತ್ತಲೂ ಸೀಳಿದ್ದು ಮಿಕ್ಕ ಮಸ್ತಿಷ್ಕ ಭಾಗಗಳಿಂದ ಇದು ಬೇರ್ಪಟ್ಟಂತೆ ಇರುವುದರಿಂದ ಈ ಹೆಸರು.

	ಹಣೆ ಹಾಲೆಗೂ (ಫ್ರಾಂಟಲ್ ಲೋಬ್) ಪಕ್ಕದ ಹಾಲೆಗೂ (ಪೆರೈಟಲ್ ಲೋಬ್) ನಡುವೆ ಇರುವ ಸೀಳಿಗೆ ಕೇಂದ್ರ ಸೀಳಿಕೆ (ಸೆಂಟ್ರಲ್ ಸಲ್ಕಸ್) ಎಂದೂ ಕೇಂದ್ರ ಸೀಳಿಕೆಯ ಹಿಂದಿರುವ ಪಕ್ಕಹಾಲೆಯ ನಲಿಕೆಯ ಹಿಂದಿನ ಕೇಂದ್ರನುಲಿಕೆ (ಪೋಸ್ಟ್‍ಸೆಂಟ್ರಲ್ ಗೈರಸ್) ಎಂದೂ ಹೆಸರು. ಇದು ದೇಹದ ಎಲ್ಲ ಭಾಗಗಳಿಂದಲೂ ಉದ್ಬವಿಸುವ ಸಂವೇದನೆಗಳನ್ನು (ಸ್ಪರ್ಶ, ಶೀತೋಷ್ಣ, ನೋವು, ಕಂಪನ, ಇತ್ಯಾದಿ) ಸಾಮಾನ್ಯವಾಗಿ ಗ್ರಹಿಸುತ್ತದೆ. ಪಾದದ ಸಂವೇದನೆಗಳು ನುಲಿಕೆಯ ಮೇಲು ಭಾಗದಲ್ಲೂ ತಲೆಯ ಸಂವೇದನೆಗಳು ಕೆಳಭಾಗದಲ್ಲೂ ಅನುಭವಕ್ಕೆ ಬರುತ್ತವೆ ಕೈ ಮುಖಗಳಿಗೆ (ಅದರಲ್ಲೂ ತುಟಿಗೆ) ಪ್ರಾತಿನಿಧ್ಯ ಹೆಚ್ಚು. ಇತರ ಬೆರಳುಗಳಿಗಿಂತ ಹೆಬ್ಬೆರಳಿಗೆ ಹೆಚ್ಚು ಭಾಗ ಮೀಸಲು. ತಲೆಯ ಹಿಂಭಾಗಕ್ಕಿಂತ ಮುಂಭಾಗಕ್ಕೆ ಅಧಿಕ ಪ್ರಾಶಸ್ತ್ಯ. ಕೇಂದ್ರ ನುಲಿಕೆಗೆ ಮುಂದೆ ಇರುವ ಹಣೆಹಾಲೆ ನುಲಿಕೆಗೆ ಮುಂದಿನ ಕೇಂದ್ರನುಲಿಕೆ (ಪ್ರೀಸೆಂಟ್ರಲ್ ಗೈರಸ್) ಎಂದು ಹೆಸರು. ಇದು ಐಚ್ಛಿಕ ಕ್ರಿಯೆಗಳು ಉದ್ಭವಿಸುವ ಭಾಗ. ಇಲ್ಲಿ ಕೂಡ ದೇಹ ತಲೆಕೆಳಗಾಗಿಯೇ ಪ್ರತಿನಿಧಿಸಲ್ಪಟ್ಟಿದೆ. ಇಲ್ಲಿಯೂ ಹೆಬ್ಬೆರಳು, ಕೈ ಬಾಯಿಗಳಿಗೆ ಹೆಚ್ಚು ಸ್ಧಾನವಿದೆ.

	ಮಹಾಮಸ್ತಿಷ್ಕದ ಸಿಪ್ಪೆಯ ಕೋಶಗಳ ವಿನ್ಯಾಸ ಮತ್ತು ಕೂಡಿಕೆಗಳ (ಕನೆಕ್ಷನ್ಸ್) ಶಸ್ತ್ರವೈದ್ಯದಲ್ಲಿ ವಿಶಿಷ್ಟ ಭಾಗಗಳನ್ನು ತೆಗೆಯುವುದರಿಂದ ಆಗುವ ಪರಿಣಾಮ, ವಿಶಿಷ್ಟ ಭಾಗಗಳನ್ನು ವಿದ್ಯುತ್ ಪ್ರಚೋದನೆಗೆ ಗುರಿಪಡಿಸಿದಾಗ ಕಾಣಬರುವ ಪ್ರತಿಕ್ರಿಯೆಗಳು, ಪ್ರಾಣಿಗಳಲ್ಲಿ ಇನ್ನೂ ವಿವರವಾದ ಪ್ರಯೋಗಗಳು ಮುಂತಾದ ವಿಧಾನಗಳಿಂದ ಮಹಾಮಸ್ತಿಷ್ಕದಲ್ಲಿ ಇನ್ನೂ ಅನೇಕ ವಿಶಿಷ್ಟ ಭಾಗಗಳನ್ನು ಗುರುತಿಸಲಾಗಿದೆ. ಕೋಶವಿನ್ಯಾಸದಲ್ಲಿರುವ ವ್ಯತ್ಯಾಸಗಳನ್ನು ಗುರುತಿಸಿ ಬ್ರಾಡ್‍ಮನ್ ಎಂಬಾತ ಮಹಾಮಸ್ತಿಷ್ಕದಲ್ಲಿ 47 ಬೇರೆ ಬೇರೆ ಕ್ಷೇತ್ರಗಳನ್ನು ವಿವರಿಸಿ ಅಂಕಿಸಿದ್ದಾನೆ. ತಂತು ಕೂಡಿಕೆಗಳನ್ನು ಗಮನಿಸಿ ವೋಗ್ಟೆ ಎಂಬಾತ 200 ಕ್ಷೇತ್ರಗಳನ್ನು ವಿಂಗಡಿಸಿದ್ದಾನೆ. ಸಾಮಾನ್ಯ ಬಳಕೆಯಲ್ಲಿ ಮಸ್ತಿಷ್ಕದ ಸಂವೇದನ ಗ್ರಾಹಕ ಭಾಗವನ್ನು ಮೇಲಿನಿಂದ ಕೆಳಗಾಗಿ 3, 1, 2, ಎಂದು ಗಣಿಸಲಾಗಿದೆ. ಐಚ್ಫಿಕ ಕ್ರಿಯಾಭಾಗವನ್ನು 4ನೆಯ ಸಂಖ್ಯೆಯ ನುಲಿಕೆಯನ್ನೂ ಸೇರಿಸಿ ಒಟ್ಟಿಗೆ ಚಾಲಕಸಿಪ್ಪೆ (ಮೋಟಾರ್ ಏರಿಯ) ಎಂದೂ ಕರೆದಿದೆ. ಈ ಭಾಗದ ವಿದ್ಯುತ್‍ಚೋದನೆಯಿಂದ ದೇಹದ ಅನ್ಯಪಾಶ್ರ್ವದಲ್ಲಿ ಅನುಗುಣ ಪೇಶಿಗಳು ಸಂಕುಚಿಸುವುದನ್ನು ಕಣ್ಣಾರೆ ನೋಡಬಹುದು. ಹಣೆಹಾಲೆಯನ್ನು ಆಂತರಿಕವಾಗಿ (ಅಂದರೆ ಬಿಳಿ ವಸ್ತುವನ್ನು ಮಾತ್ರ) ಕೊಯ್ದರೆ-ಇದಕ್ಕೆ ಪ್ರಿಫ್ರಾಂಟಲ್ ಲೋಬೋಟಮಿ ಅಥವಾ ಲ್ಯೂಕಾಟಮಿ ಎಂದು ಹೆಸರು-ಅದಕ್ಕೂ ಮಸ್ತಿಷ್ಕದ ಬೇರೆ ಭಾಗಗಳಿಗೂ ಇರುವ ಕೂಡಿಕೆಗಳು ಛಿದ್ರವಾಗುತ್ತವೆ. ಇದಕ್ಕಿಂತಲೂ ಹೆಚ್ಚಾಗಿ ಅದರೊಡನೆ ಥÉಲಮಸ್ಸಿಗೆ ಇರುವ ಕೂಡಿಕೆಗಳು ಕತ್ತರಿಸಲ್ಪಡುತ್ತವೆ. ಇದರಿಂದ ಆಹಾರಭಾಗ ಮಿಕ್ಕ ಭಾಗಗಳಿಂದ ಬೇರ್ಪಟ್ಟಂತಾಗುತ್ತದೆ. ಉಗ್ರಮಾನಸಿಕ ಆಕ್ರಮಣ ಚಿಕಿತ್ಸೆಯಲ್ಲಿ ಹೀಗೆ ಮಾಡುವುದಿದೆ. ಅನೇಕ ವೇಳೆ ಇದರಿಂದ ವ್ಯಕ್ತಿಯ ಸುಲಭೋದ್ರೇಕ ವೈಪರೀತ್ಯ ಕಡಿಮೆ ಆಗಿ ಎಷ್ಟೋ ಅನುಕೂಲವಾಗುತ್ತದೆ. ಮುಂದಿನ ಹಾಲೆಯ ಇತರ ಭಾಗಗಳ ಪ್ರಚೋದನೆಯಿಂದ ರಕ್ತಪರಿಚಲನೆಗೆ, ಉಸಿರಾಟ, ಪಾಪೆಯ ಪ್ರತಿಕ್ರಿಯೆ ಮುಂತಾದವುಗಳಲ್ಲಿ ಪರಿಣಾಮಗಳು ಕಂಡುಬರುತ್ತವೆ. ಹಣೆಹಾಲೆಯ ಕೆಳನುಲಿಕೆಯಲ್ಲಿರುವುದು 44ನೆಯ ಸಂಖ್ಯೆಯ ಕ್ಷೇತ್ರ. ಇದಕ್ಕೆ ಬ್ರೋಕಾಸನ ವಾಕ್‍ಕ್ಷೇತ್ರ ಎಂದು ಹೆಸರು. ಇದು ಬಲಚರಲ್ಲಿ ಎಡ ಗೋಳಾರ್ಧದಲ್ಲೂ ಎಡಚರಲ್ಲಿ ಬಲಗೋಳಾರ್ಧದಲ್ಲೂ ಕಾರ್ಯಶೀಲವಾಗಿರುವುದು. ಇನ್ನೊಂದು ಕಡೆ ನಿಷ್ಕ್ರಿಯವಾಗಿರುತ್ತದೆ (ಸೈಲೆಂಟ್ ಏರಿಯ).

	17ನೆಯ ಸಂಖ್ಯೆಯ ಕ್ಷೇತ್ರ ದೃಷ್ಟಿಜ್ಞಾನಕ್ಷೇತ್ರ. ಮಸ್ತಿಷ್ಕದ ಹಿಂದಿನ ಧ್ರುವವನ್ನು ಬಳಸಿಕೊಂಡು ಗೋಳಾರ್ಧದ ಹೊರಮೈಮೇಲೂ ಪಸರಿಸಿದೆ. ಇದು ಅದೇ ಕಡೆಯ ಪಕ್ಕ ಜಾನುಕಾಯದಿಂದ (ಲ್ಯಾಟರಲ್ ಜೆನಿಕ್ಯುಲೇಟ್ ಬಾಡಿ) ತಂತುಗಳನ್ನು ಪಡೆಯುತ್ತದೆ. ವಸ್ತುಗಳ ಬಣ್ಣ, ಗಾತ್ರ, ರೂಪ, ಚಲನೆ, ಕಾಂತಿ, ಪಾರದರ್ಶಕತೆ ಇತ್ಯಾದಿಗಳನ್ನು ಗುರುತಿಸುವುದು ಈ ಕ್ಷೇತ್ರದ ಕ್ರಿಯೆ. 18, 19ನೆಯ ಸಂಖ್ಯೆಯ ಕ್ಷೇತ್ರಗಳು ದೃಷ್ಟಿಜ್ಞಾನ ಕ್ಷೇತ್ರವನ್ನು ಸುತ್ತುವರಿದಿವೆ. ಇವು ದೃಷ್ಟಿ ಮಾನಸಿಕ ಕ್ಷೇತ್ರಗಳು (ಸೈಕಿಕ್ ಏರಿಯ ಆಫ್ ವಿಷನ್). ದೃಷ್ಟಿಯ ಅನುಭವವನ್ನು ಪರ್ಯಾಲೋಚಿಸಿ, ಪರಿಷ್ಕರಿಸಿ, ವಿಶದೀಕರಿಸಿ. ಹಿಂದಿನ ಅನುಭವಗಳೊಡನೆ ಸಂಯೋಜಿಸಿ, ಹೋಲಿಸಿ ಗುರುತು ಹಚ್ಚುವ ಸಾಮಥ್ರ್ಯವುಳ್ಳದ್ದು. ಅಂದರೆ 17ನೆಯ ಕ್ಷೇತ್ರದ ಅನುಭವವನ್ನು ಅರ್ಥವತ್ತಾಗಿ ಮಾಡಿ ದೃಷ್ಟಿ ಮುದ್ರಿಕೆಗಳನ್ನು ಕಣ್ಣುಗಳ ಚಲನೆಗಳೊಡನೆ ಸಂಯೋಜಿಸಿ ತಕ್ಕ ಪ್ರತಿಕ್ರಿಯೆ ಜರುಗುವಂತೆ ಮಾಡುತ್ತದೆ.

	41,42ನೆಯ ಸಂಖ್ಯೆಯ ಕ್ಷೇತ್ರ ಶ್ರವಣ ಕ್ಷೇತ್ರ.. ಇದು ಕೆಳಹಾಲೆಯ ಮೇಲಡಿ ಭಾಗದಲ್ಲಿರುವ ಅಡ್ಡನುಲಿಕೆಯಲ್ಲಿದೆ. ಇದಕ್ಕೆ ಒಳಜಾನುಕಾಯದಿಂದ (ಮೀಡಿಯಲ್ ಜೆನಿಕ್ಯುಲೇಟ್ ಬಾಡಿ) ತಂತುಗಳು ಬಂದು ಸೇರುತ್ತವೆ. ಈ ಕ್ಷೇತ್ರ ಶಬ್ದದ ಘೋಷ (ಲೌಡ್‍ನೆಸ್) ಮತ್ತು ಶ್ರುತಿಗಳನ್ನೂ (ಪಿಚ್) ಶಬ್ದೋತ್ಪತ್ತಿಯ ಆಕರ ಗುರುತಿಸುವ ವಿಶಿಷ್ಟ ಗುಣವನ್ನೂ (ಕ್ವಾಲಿಟಿ) ಅನುಭವಕ್ಕೆ ತರುವುದು. ಇದರ ಪಕ್ಕಹಾಲೆಯ ಮೇಲುನುಲಿಕೆಯಲ್ಲಿ ಶ್ರವಣ ಮಾನಸಿಕ ಕ್ಷೇತ್ರವಿದೆ. ಇದರಿಂದ ಕೇಳಿದ ಶಬ್ದದ ಅರ್ಥವಿಸುವಿಕೆ (ಅಂದರೆ ಶಬ್ದದ ಉತ್ಪತ್ತಿ ಸ್ಧಾನ ಮತ್ತು ಅದರ ಪ್ರಾಮುಖ್ಯ) ಸಾಧ್ಯವಾಗುತ್ತದೆ.

	ಮಹಾಮಸ್ತಿಷ್ಕದ ಪ್ರತಿಯೊಂದು ಗೋಳಾರ್ಧದ ನಡುಮಧ್ಯದಲ್ಲೂ ದ್ರವದಿಂದ ಭರ್ತಿ ಆಗಿರುವ ಕುಳಿ (ಕುಹರ) ಇದೆ. ಇವಕ್ಕೆ ಮಿದುಳಿನ ಪಕ್ಕ ಕುಳಿಗಳೆಂದು (ಕುಹರ) (ಲ್ಯಾಟರಲ್ ವೆಂಟ್ರಿಕಲ್ಸ್) 1ನೆಯ ಮತ್ತು 3ನೆಯ ಮಿದುಳುಕುಳಿಗಳೆಂದೂ (ಕುಹರ) ಹೆಸರು. ಕುಹರಭಿತ್ತಿಯಲ್ಲಿರುವ ವಿಶಿಷ್ಟ ಕೋಶಾಚ್ಫಾದಿತ ಲೋಮನಾಳ ಗೊಂಚಲುಗಳಿಂದ ಈ ದ್ರವ ನಿರಂತರವಾಗಿ ಉತ್ಪತ್ತಿ ಆಗುತ್ತದೆ. ಎರಡು ಪಕ್ಕ ಕುಹರಗಳನ್ನೂ ಪರಸ್ಪರ ಸೇರಿಸುವ ಅಂತರ್ಕುಹರ ರಂಧ್ರ (ಇಂಟರ್‍ವೆಂಟ್ರಿಕ್ಯುಲರ್ ಫೊರಾಮೆನ್) ಇದೆ. ಇದೇ ರಂಧ್ರ ಎರಡೂ ಕುಹರಗಳ ಅಡಿಯಲ್ಲಿ ನಡುಮಧ್ಯದಲ್ಲಿರುವ ಮಿದುಳಿನ 3ನೆಯ ಕುಹರಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ಪಕ್ಕ ಕುಹರಗಳಲ್ಲಿ ದ್ರವವನ್ನು ಸ್ರವಿಸುವ ರಕ್ತನಾಳ ಗೊಂಚಲು ಈ ರಂಧ್ರದ ಮೂಲಕ 3ನೆಯ ಕುಹರದ ಒಳಗೂ ಪಸರಿಸಿದೆ.

	ಮಹಾಮಸ್ತಿಷ್ಕದ ಬಿಳಿವಸ್ತು ಬೂದುವಸ್ತುವಿನ ಅಡಿಯಲ್ಲೇ ಎಲ್ಲ ಕಡೆಯೂ ಇದೆ. ಇದರಲ್ಲಿ ಬಿಳಿ ನರತಂತುಗಳೇ ಪ್ರಧಾನ ಘಟಕಗಳು. ಈ ಹಿಂದೆ ಹೇಳಿರುವಂತೆ ತಿರುಳಿನಂತಿರುವ ಈ ಬಿಳಿ ವಸ್ತುವಿನಲ್ಲಿ ಬೂದುಬಣ್ಣದ ಗುಂಬಗಳಿವೆ. ಇವಕ್ಕೆ ಅಡಿಗುಂಬಗಳು (ಬೇಸಲ್ ನ್ಯೂಕ್ಲಿಯೈ) ಎಂದು ಹೆಸರು. ಇವುಗಳಲ್ಲಿ ಮುಖ್ಯವಾದ್ದು ಅಡಿಗಂಬ ಗೆರೆಕಾಯ (ಕಾರ್ಪಸ್ ಸ್ಟ್ರೈಯೇಟಮ್). ಇದು ಎರಡು ಭಾಗಗಳಿಂದಾಗಿದೆ. ದೇಹ ಮಧ್ಯಗೆರೆ ಕಡೆಗೆ ಇರುವುದು ಬಾಲಗುಂಬ (ಕಾಡೇಟ್ ನ್ಯೂಕ್ಲಿಯಸ್), ಹೊರಗೆ ಇರುವುದು ಮಸೂರಿಕಗುಂಬ (ಲೆಂಟಿಫಾರಮ್ ನ್ಯೂಕ್ಲಿಯಸ್). ಇವೆರಡರ ನಡುವೆ ಬಿಳಿ ನರತಂತುಗಳಿಂದ ರಚಿತವಾದ ಬಿಳಿ ವಸ್ತುವಾಗಿ ಒಳಕವಚ ಇದೆ (ಇಂಟರ್ನಲ್ ಕ್ಯಾಪ್ಸೂಲ್). ಇದರ ಮೂಲಕವೇ ಮಹಾಮಸ್ತಿಷ್ಕದ ಗೋಳಾರ್ಧವನ್ನು ದೇಹದ ಇನ್ನೊಂದು ಪಾಶ್ರ್ವದೊಡನೆ ಸಂಬಂಧಿಸುವ ಎಲ್ಲ ಜ್ಞಾನವಾಹಿ ಹಾಗೂ ಕ್ರಿಯಾವಾಹಿ ನರತಂತುಗಳು ಹಾಯುವುದಾಗಿದೆ. ಬಲು ಕಿರಿದಾದ ಈ ಸ್ಧಳದಲ್ಲಿ ವ್ಯಾಪಕ ಹಾಗೂ ಪ್ರಮುಖ ನರತಂತುಗಳು ಸಾಗುವುದರಿಂದ ಈ ಸ್ಧಳದಲ್ಲಿ ಅಲ್ಪ ರಕ್ತಸ್ರಾವದಂಥ ಆಘಾತವಾದರೂ ಪಕ್ಷಾಘಾತ ಇಲ್ಲವೆ ಪ್ರಾಣನಾಶ ಆಗುವುದು ಆಶ್ಚರ್ಯವಿಲ್ಲ. ಮಸೂರಿಕ ಗುಂಬದಲ್ಲಿ ಪುಟಮೆನ್ ಎಂಬ ದೊಡ್ಡ ಹೊರಭಾಗವನ್ನೂ ಗ್ಲೋಬಸ್ ಪ್ಯಾಲಿಡಸ್ (ಬಿಳಿಗುಂಬ) ಎಂಬ ಒಳಭಾಗವನ್ನೂ ಗುರುತಿಸಬಹುದು. ಬಾಲಗುಂಬ ಮಹಾಮಸ್ತಿಷ್ಕದಲ್ಲಿ ಪಕ್ಕ ಕುಹರದ ಭಿತ್ತಿಯನ್ನು ಉಬ್ಬಿಸುತ್ತದೆ. ಈ ಗುಂಬದಲ್ಲಿ ತಲೆ, ಕಾಯ ಮತ್ತು ಬಾಲಗಳನ್ನು ಗುರುತಿಸಬಹುದು. ಬಾಲ ಅದರ ಮುಂದೆಯೇ ಇರುವ ಬಾದಾಮಿಗುಂಬದಲ್ಲಿ (ಅಮಿಗ್ಡಲಿಸ್) ಅಂತ್ಯಗೊಳ್ಳುತ್ತದೆ. ಪುಟಮೆನ್ನಿನ ಹೊರಭಾಗದಲ್ಲಿ ಹೊರಕವಚ (ಎಕ್‍ಸ್ಟರ್ನಲ್ ಕ್ಯಾಪ್ಸೂಲ್) ಮತ್ತು ತೆಳುಗಂಬ ಇವೆ. ಒಳಕವಚ ಹೊರಕವಚಗಳು ಮಸೂರಿಕ ಗುಂಬದ ಒಳ ಮತ್ತು ಹೊರ ಕವಚಗಳೇ ಆಗಿರುವುದು ವ್ಯಕ್ತ. ಈ ಗುಂಬಗಳ ಕ್ರಿಯೆ ನಿರ್ದಿಷ್ಟವಾಗಿ ಹೀಗೆಯೇ ಎಂಬುದು ಗೊತ್ತಿಲ್ಲ.

	ವಾಸನೆ ಮಿದುಳು (ರ್ಹೈನೆನ್‍ಸೆಫಲಾನ್): ಇದು ಮಹಾಮಸ್ತಿಷ್ಕದಲ್ಲಿ ಕ್ರಿಯೆಗೆ ಅನುಗುಣವಾಗಿ ವಿಂಗಡಿಸಬಹುದಾದ ಒಂದು ಭಾಗ. ಕೆಳದರ್ಜೆ ಪ್ರಾಣಿಗಳಲ್ಲಿ ಅದರಲ್ಲೂ ಜೀವಕ್ರಿಯೆಯಲ್ಲಿ ವಾಸನೆ ಪ್ರಮುಖ ಸಂವೇದನೆಯಾಗಿರುವ ಪ್ರಾಣಿಪಂಗಡಗಳಲ್ಲಿ ಇದು ಮುಖ್ಯವಾಗಿದೆ. ಮಾನವನಲ್ಲಿ ವಾಸನೆ ಮುಖ್ಯ ಸಂವೇದನೆ ಆಗದೇ ಇದ್ದರೂ ಅದರಿಂದ ದೇಹಕ್ರಿಯೆಗೆ ಗಮನೀಯ ಮಾಹಿತಿ ದೊರೆಯದೆ ಮಾನಸಿಕವಾಗಿ ಅದು ವ್ಯಕ್ತಿಯನ್ನು ಪ್ರಚೋದಿಸಬಹುದಾಗಿದೆ. ವಾಸನೆ ಮಿದುಳು ಮಹಾಮಸ್ತಿಷ್ಕದಲ್ಲಿ ಒಂದಕ್ಕೊಂದು ಸಂಪರ್ಕಿಸಿ ವ್ಯಾಪಕವಾಗಿರುವ 7 ಭಾಗಗಳಿಂದಾಗಿದೆ. ವಾಸನೆಗಡ್ಡೆ (ಅಲ್‍ಫ್ಯಾಕ್ಟರಿ ಬ್ರ್ಯಾಕ್ಟ್, ಸ್ಟ್ರೈಯ). ಅಂಧ್ರಗಳ ಮುಂದಿನ ವಸ್ತು (ಪರ್ಪೂರೇಟೆಡ್ ಏರಿಯ). ಸ್ಧಳೀಯ ಸೀಬೆಹಣ್ಣುರೂಪದ ಮೇಲೆ (ಪೃರಿಫಾರಮ್ ಏರಿಯ). ಕಡಲ್‍ಗುದುರೆ (ಹಿಪ್ಪೋಕ್ಯಾಮ್‍ಪಸ್), ಪಾಶ್ರ್ವಘ್ರಾಣ ಕೇಂದ್ರಗಳು (ಲ್ಯಾಟರಲ್ ಆಲ್‍ಫ್ಯಾಕ್ಟರಿ ಏರಿಯ). ಕಮಾನು (ಲಿಂಬನ್) ಇವು ವಾಸನೆಗೆ ಸಂಬಂಧಪಟ್ಟವು ಅಲ್ಲ ಎನ್ನುವುದು ವ್ಯಕ್ತ.

	ವಾಸನೆಗೆಡ್ಡೆ ಜಾಲರಾಸ್ಥಿಯ ಜರಡಿರೇಖೆಯ ಮೇಲೆ (ಕ್ರಿಬ್ರಿಫಾರಮ್ ಪ್ಲೇಟ್ ಆಫ್ ಎತ್‍ಮಾಯ್ಡ್ ಬೋನ್) ಇದೆ. ವಾಸನೆನರದ (1ನೆಯ ತಲೆನರ, ಆಲ್ ಫ್ಯಾಕ್ಟರಿನರ್ವ್) ಸುಮಾರು 20 ನರತಂತು ಕಟ್ಟುಗಳು ಜರಡಿಯಲ್ಲಿ ತೂರಿ ಗೆಡ್ಡೆಯನ್ನೂ ಇಲ್ಲಿಂದ ನರತಂತುಗಳು ಹೊರಟು ಘ್ರಾಣಮಾರ್ಗವಾಗಿ ಮಸ್ತಿಷ್ಕದ ಹಣೆಹಾಲೆಯನ್ನೂ ಸೇರುತ್ತವೆ. ಬೆಕ್ಕಿನಲ್ಲಿ ವಿದ್ಯುತ್ ಪ್ರಚೋದನೆಗಳಿಂದ ವಿಚಿತ್ರ ಪರಿಣಾಮಗಳಾಗುವುದನ್ನು ತೋರಿಸಿದ್ದಾರೆ. ಬಾದಾಮಿಗುಂಬದ ಕೆಳಭಾಗದ ಚೋದನೆಯಿಂದ ಕಾಲುಗಳನ್ನು ಮಡಿಸಿ ನೀಡುವುದು, ನೆಕ್ಕಿ ಮೂಸಿ ಆಗಿಯುವುದು. ಕಮ್ಮಿ ಉಸಿರಾಟ, ಐಚ್ಪಕ ಸ್ನಾಯುಗಳ ಸ್ವಯಂಚಾಲನೆ. ಪಾಪೆಗಳು ದೊಡ್ಡದಾಗುವುದು, ಜೊಲ್ಲುಸುರಿಕೆ, ಮಲಮೂತ್ರ ವಿಸರ್ಜನೆ ಮತ್ತು ರೋಮಾಂಚನ ಕಂಡುಬರುತ್ತವೆ. ಪಾಶ್ರ್ವಘ್ರಾಣ ಕೇಂದ್ರಗಳ ಚೋದನೆಯಿಂದ ಕಾಲುಗಳನ್ನು ಮಡಿಸಿ ನೀಡುವುದು, ನೆಕ್ಕಿ ಮೂಸಿ ಆಗಿಯುವುದು, ಕಮ್ಮಿ ಉಸಿರಾಟ, ಐಚ್ಪಿಕ ಸ್ನಾಯುಗಳ ಸ್ವಯಂಚಾಲನೆ. ಪಾಪೆಗಳು ದೊಡ್ಡದಾಗುವುದು, ಜೊಲ್ಲುಸುರಿಕೆ, ಮಲಮೂತ್ರ ವಿಸರ್ಜನೆ ಮತ್ತು ರೋಮಾಂಚನ ಕಂಡುಬರುತ್ತವೆ. ಪಾಶ್ರ್ವಘ್ರಾಣ ಕೇಂದ್ರಗಳ ಚೋದನೆಯಿಂದ ಎದುರು ಹಾಗೂ ಪಕ್ಕದಲ್ಲಿ ಹುಡುಕಾಡುವ ಚಲನೆಗಳು, ತಬ್ಬಿಬ್ಬಾಗುವುದು, ಕಾತರತೆ, ಕೆಲವು ವೇಳೆ ಭಯ, ಕೋಪ, ಉಗ್ರತೆ ಇವು ವಿವಿಧವಾಗಿ ಕಂಡುಬರುತ್ತವೆ. ಮಾನವನÀಲ್ಲಿ ಈ ಮಿದುಳು ಭಾಗ ರೋಗಗ್ರಸ್ಧವಾದರೆ ದುರ್ವಾಸನೆಗಳ ಭ್ರಾಂತಿ ಆಗುತ್ತದೆ ರುಚಿಗಳ ಭ್ರಾಂತಿಯೂ ಉಂಟಾಗಬಹುದು. ಸುಮ್ಮನೆ ಆಗಿಯುವುದು, ತುಟಿಯಾಡಿಸಿ ಚಪ್ಪರಿಸುವುದು ಇವುಗಳೂ ಕಾಣಬರಬಹುದು. ಕನಸಿನಲ್ಲಿ ಏನೋ ಆದಂತೆ ಭ್ರಮಣೆ ಆಗುವುದೂ ಉಂಟು.

ಥÉಲಮಸ್: ಭ್ರೂಣದ ಮುಮ್ಮಿದುಳಿನ ಇನ್ನೊಂದು ಮುಖ್ಯಭಾಗ. ಇದು ಮಹಾಮಸ್ತಿಷ್ಕದ ಅಡಿಯಲ್ಲಿ ಅಂಡಾಕಾರ ಕಾಯ. ಮಿಕ್ಕ ಮಿದುಳಿನ ಭಾಗಗಳಂತೆಯೇ ಇದು ಕಣಸಮೃದ್ಧಿಯಾಗಿರುವ ಹೊರಬೂದುವಸ್ತುವಿನಿಂದಲೂ ಬಿಳಿನರತಂತುಗಳು ಸಮೃದ್ಧಿಯಾಗಿರುವ ಒಳ ಬಿಳಿ ವಸ್ತುವಿನಿಂದಲೂ ರಚಿತವಾಗಿದೆ. ಇದರ ಅಗ್ರ ಎಲ್ಲೆ ದೃಷ್ಟಿನರಗಳ ಕತ್ತರಿ (ಆಪ್ಟಿಕ್ ಕೈಯಾಸ್ಮ), ಅಂತ್ಯ ಇಲ್ಲೆ ನಡುಮಿದುಳಿನ ಭಾಗಗಳಾದ ಚತುಷ್ಕಾಯಗಳು (ಕಾರ್ಪೋರ ಕ್ವಾಡ್ರಿಜೆಮೈನ). ಇದು ದೇಹದ ಎಲ್ಲ ಭಾಗಗಳಿಂದಲೂ ಸಂವೇದನೆಗಳನ್ನು ಗ್ರಹಿಸುವುದಾದರೂ ಅವು ಅರಿವಿಗೆ ಬರುವುದಿಲ್ಲ. ಆದರೆ ಅಗತ್ಯ ಪ್ರತಿಕ್ರಿಯೆಗಳನ್ನು ಥೆಲಮಸ್ ಆಗಮಾಡುತ್ತದೆ. ಇವು ಸ್ಧೂಲ ಪ್ರತಿಕ್ರಿಯೆಗಳಾಗಿಯೂ ಅನೈಚ್ಫಿಕ ಪ್ರತಿಕ್ರಿಯೆಗಳಾಗಿಯೂ ಇರುತ್ತವೆ. ಥೆಲಮಸ್ಸಿನ ಒಳಗೆ 3ನೆಯ ವಿದುಳುಕುಳಿ ಭಾಗಶಃ ಇದೆ. ಥÉಲಮಸ್ಸಿನ ಮೇಲೆ ಮಂಡಿಸಿರುವ ಮಹಾಮಸ್ತಿಷ್ಕದ ಭಾಗದ ಒಳಗೆ 1 ಮತ್ತು 2ನೆಯ ಮಿದುಳು ಕುಳಿ (ಕುಹರ) ಆಯಾ ಗೋಳಾರ್ಧದಲ್ಲಿದೆ. ಥÉಲಮಸ್ಸಿನ ಬಿಳಿ ತಿರುಳಿನಲ್ಲಿ ಅನೇಕ ಗುಂಬಗಳು ವಿಶಿಷ್ಟ ಗುಂಪುಗಳಾಗಿ ಕಂಡು ಬರುತ್ತವೆ. ಒಳ ಮತ್ತು ಹೊರ ಜಾನುಕಾಯಗಳು (ಮೀಡಿಯಲ್ ಅಂಡ್ ಲ್ಯಾಟರಲ್ ಜೈನಿಕ್ಯುಲೇಟ್ ಬಾಡೀಸ್) ಅನುಷಂಗಿಕ ಭಾಗಗಳಂತೆ ಕಂಡು ಬಂದರೂ ವಾಸ್ತವವಾಗಿ ಥÉಲಮಸ್ಸಿನ ಭಾಗಗಳೇ ಆಗಿವೆ. ಥÉಲಮಸ್ಸಿನ ಬೆನ್ನುಭಾಗದಲ್ಲಿ (ಡಾರ್ಸಮ್) ಎಪಿಥೆಲಮಸ್ ಅಥವಾ ಪೈನಿಯಲ್ ಕಾಯ ಇದೆ. ಅಳಿದು ಹೋಗಿರುವ ಅನೇಕ ಕೆಳದರ್ಜೆ ಪ್ರಾಣಿಜಾತಿಗಳಲ್ಲಿ ಮತ್ತು ಹಾಲಿ ಒಂದೇ (ಸರೀಸೃಪಕ್ಕೆ ಸೇರಿದ) ಪ್ರಾಣಿಯಲ್ಲಿ ಇದು ಬುರುಡೆಯ ಹೊರಕ್ಕೆ ಚಾಚಿಕೊಂಡಿದ್ದು ಅದರ ಮೇಲೆ ಕ್ರಿಯಾಶೀಲವಾದ ಒಂದು ಕಣ್ಣು ಇದೆ. ಥÉಲಮಸ್ಸಿನ ಅಡಿಯಲ್ಲಿರುವ ಮಿದುಳು ಭಾಗಕ್ಕೆ ಹೈಪೊಥೆಲಮಸ್ ಇದೆ. ಹೈಪೊಥÉಲಮಸ್ಸಿನ ತಳಕ್ಕೆ ಪಿಟ್ಯುಯಿಟರಿ ಕಾಯ ತೊಟ್ಟಿನಿಂದ ಅಂಟಿಕೊಂಡಿದೆ.

ಮಧ್ಯಮಿದುಳು (ಮಿಡ್ ಬ್ರೆಯ್ನ್): ಥÉಲಮಸ್ಸಿಗೂ ಸೇತುವೆಗೂ (ಪ್ರಾನ್ಸ್) ನಡುವೆ ಇರುವ ಮಿದುಳು ಭಾಗ, ನಡು ಮಿದುಳು ಎಂದು ಕೂಡ ಹೆಸರಿದೆ. ಇದೂ ಇದರ ಕೆಳಚಾಚಾಗಿರುವ ಮೆಡ್ಯುಲವೂ ಸೇರಿ ಮಿದುಳು ಕಾಂಡ (ಬ್ರೆಯ್ನ್‍ಸ್ಟೆಮ್) ಆಗುತ್ತದೆ. ಥೆಲಮಸ್ ಮಿದುಳು ಪೀಠ ಅದರ ಮೇಲೆ ಪ್ರತಿಷ್ಠಿತವಾಗಿ ಮಹಾಮಸ್ತಿಷ್ಕವಿದೆ. ನಡುಮಿದುಳಿನ ಒಳಗೆ ಸಿಲ್ವಿಯಸ್ಸಿನ ನಾಲೆ (ಅಕ್ವಿಡಕ್ಟಸ್ ಸಿಲ್ವಿಯಸ್) ಇದ್ದು ಇದು ಮೇಲಿನ 3ನೆಯ ಕುಹರವನ್ನು ಕೆಳಗಿನ 4ನೆಯ ಕುಹರಕ್ಕೆ ಜಂಟಿಸುತ್ತದೆ. ಇದರಲ್ಲಿ ಮಿದುಳು ದ್ರವ ತುಂಬಿಕೊಂಡಿದೆ. ನಡುಮಿದುಳಿನಲ್ಲಿ ನಾಲೆಯ ಮುಂಭಾಗ ವಸ್ತುವಿಗೆ ಮಹಾ ಮಸ್ತಿಷ್ಕದ ಅಡಿತೊಟ್ಟು (ಎಡ, ಬಲ ಎರಡು-ಸೆರಿಬ್ರಲ್ ಪಿಡಂಕಲ್ಸ್) ಎಂದೂ ನಾಲೆಯ ಹಿಂಭಾಗವಸ್ತುವಿಗೆ ಚತುಷ್ಕಾಯ (ಕಾರ್ಯ ಚತುಷ್ಟಯ-ಕಾರ್ಪೊರ ಕ್ವಾಡ್ರಿಜೆಮೈನ) ಎಂದೂ ಹೆಸರು. ಚತುಷ್ಕಾಯದಲ್ಲಿ ಮೇಲಿನ ಜೊತೆ ಕಣ್ಣುಗಳೂ ಕೆಳಗಿನ ಜೊತೆ ಕಿವಿಗಳೂ ಸಂಬಂಧಿತವಾಗಿವೆ. ಮೇಲಿನ ಜೊತೆ ಇರುವ ಮಟ್ಟದಲ್ಲೇ ನಡುಮಿದುಳಿನಲ್ಲಿ 4ನೆಯ ತಲೆನರದ ಗುಂಬವಿದೆ.

ಲಘುಮಸ್ತಿಷ್ಕ (ಸೆರಿಬೆಲ್ಲಮ್): ಕಿರಿಮಸ್ತಿಷ್ಕ ಪರ್ಯಾಯನಾಮ. ಮಿದುಳಿನ ಈ ಭಾಗ ಬುರುಡೆಯ ತಳದಲ್ಲಿ ಕಾಣಬರುವ ಹಿಂದಿನ ಕುಳಿಯಲ್ಲಿ ಅಡಕವಾಗಿದೆ. ಇದರ ತೂಕ ಮಹಾಮಸ್ತಿಷ್ಕದ ⅛ರಷ್ಟು.. ಅಂದರೆ ಸುಮಾರು 150 ಗ್ರಾಮ್. ಇದರ ಮೈಮೇಲೆ ಅಡ್ಡಡ್ಡವಾಗಿ ಅನೇಕ ಸಮದೂರ ಗೆರೆಗಳೂ ಅವುಗಳ ನಡುವೆ ಉಬ್ಬಿಕೊಂಡಿರುವ ಕಿರುಹಾಲೆಗಳೂ (ಲಾಬ್ಯೂಲ್ಸ್) ಇವೆ. ಬಲು ಹೆಚ್ಚು ಸಂಖ್ಯೆಯಲ್ಲಿರುವ ಈ ಕಿರುಹಾಲೆಗಳಿಂದಾಗಿ ಕಿರಿಮಸ್ತಿಷ್ಕದ ಮೇಲ್ಮೈ ವಿಸ್ತೀರ್ಣ ಅಗಾಧವಾಗಿದೆ. ಮಹಾಮಸ್ತಿಷ್ಕದ ಗಾತ್ರದಲ್ಲಿ ಕೇವಲರಷ್ಟು ಮಾತ್ರ ಲಘುಮಸ್ತಿಷ್ಕದ ಗಾತ್ರ ಇದ್ದರೂ ಅದರ ಮೇಲ್ಮೈ ವಿಸ್ತೀರ್ಣ ಮಹಾಮಸ್ತಿಷ್ಕದ1/6 ರಷ್ಟು ಇದೆ ಎಂದು ಅಂದಾಜಿಸಲಾಗಿದೆ. ಮಿದುಳಿನ ಮಾಮೂಲು ರಚನೆಯಂತೆ ಲಘುಮಸ್ತಿಷ್ಕದಲ್ಲೂ ಹೊರವಸ್ತುವಿನ ಬಣ್ಣ ಬೂದು, ಒಳವಸ್ತುವಿನದು ಬಿಳಿ. ಇವುಗಳಲ್ಲಿ ಅನುಕ್ರಮವಾಗಿ ಕಣಬಾಹುಳ್ಯ ಮತ್ತು ತಂತುಬಾಹುಳ್ಯ ಕಾಣಬಹುದು. ಇವನ್ನು ಕೂಡಿಸುವ ತಂತುಗಳು ಆಯಾಕಾರ ಕಂಡಿಗಳುಳ್ಳ ಜಾಲರಿಯಂತೆ ಏರ್ಪಟ್ಟಿವೆ. ಇಷ್ಟು ನಿಕಟವಾಗಿ ಸಂಬಂಧಗೊಂಡಿದ್ದು ಒಂದು ಕಣದಿಂದ ಅನೇಕ ಕಣಗಳು ಪ್ರಭಾವಿಸಲ್ಪಡುವುದು ಲಘುಮಸ್ತಿಷ್ಕದ ಕ್ರಿಯಾಚರಣೆಗೆ ಕಾರಣ. ಈ ಕಣಗಳನ್ನು ಬಂದು ಸೇರುವ ಮತ್ತು ಇವುಗಳಿಂದ ಹೊರಡುವ ಬಿಳಿ ನರತಂತುಗಳು ಲಘುಮಸ್ತಿಷ್ಕದ ಒಳವಸ್ತುವಾಗಿದ್ದು ಇವು ಲಘುಮಸ್ತಿಷ್ಕವನ್ನು ಮಹಾಮಸ್ತಿಷ್ಕಕ್ಕೂ ಮಿದುಳು ಬಳ್ಳಿಗೂ ಸಂಪರ್ಕಿಸುತ್ತವೆ.

	ಲಘುಮಸ್ತಿಷ್ಕದ ಕ್ರಿಯೆ ಮುಖ್ಯವಾಗಿ ಎರಡು. ಒಂದನೆಯದು ವ್ಯಕ್ತಿಯ ನೆಟ್ಟನೆ ನಿಲವನ್ನು ಕಾಪಾಡುವುದು. ಎರಡನೆಯದು ಐಚ್ಛಿಕ ಚಲನೆಗಳು ಸಮರ್ಪಕವಾಗಿ ನೆರವೇರುವಂತೆ (ಸಂಬಂಧಿಸಿದ ಸ್ನಾಯುಗಳೆಲ್ಲ ಯುಕ್ತ ರೀತಿಯಲ್ಲಿ ಸಂಕೋಚಿಸಿ ವಿಕಸಿಸುವಂತೆ) ಅವುಗಳಲ್ಲಿ ಪರಸ್ಪರ ಸುಸಂಘಟನೆ (ಕೊ-ಆರ್ಡಿನೇಷನ್) ಕಾಪಾಡುವುದು. ಹಿರಿಮಸ್ತಿಷ್ಕದ ಕ್ರಿಯೆಯಿಂದ ಪ್ರಾರಂಭವಾಗುವ ಐಚ್ಛಿಕ ಚಲನೆಯ ಮಾಹಿತಿ ಮಿದುಳುಬಳ್ಳಿಯ ಮೂಲಕ ಸಂಬಂಧಪಟ್ಟ ನರಗಳಿಗೆ ತಲಪುವಾಗಲೇ ಲಘುಮಸ್ತಿಷ್ಕಕ್ಕೂ ತಲಪುತ್ತದೆ. ಇದರಂತೆ ಸ್ನಾಯುಗಳು ಸಂಕುಚಿಸುತ್ತಿರುವ ಮಾಹಿತಿ ವಾಪಸ್ಸು ಮಿದುಳುಬಳ್ಳಿ ಮಹಾಮಸಿಷ್ಕಗಳಿಗೆ ಹೋಗುತ್ತಿರುವಾಗಲೇ ಲಘುಮಸ್ತಿಷ್ಕಕ್ಕೂ ಹೋಗುತ್ತದೆ. ಉದ್ದಿಷ್ಟ ಕ್ರಿಯೆ ಸಮರ್ಪಕವಾಗಿ ನಡೆಯಬೇಕಾದರೆ ಹೋಗುವ ಮತ್ತು ಬರುವ ಎರಡು ರೀತಿಯ ಮಾಹಿತಿಗಳನ್ನೂ ಹೋಲಿಸಿ ತಾಳೆ ಬರದೇ ಇದ್ದರೆ ಹಾಗೆ ಬರುವಂಥ ಮಾರ್ಪಾಡು ಮಾಡಬೇಕು. ಅಂದರೆ ಹಿರಿಮಸ್ತಿಷ್ಕದಿಂದ ಪುನಃ ಐಚ್ಛಿಕ ಸ್ನಾಯುಗಳಿಗೆ ಸಕ್ರಮಗೊಳಿಸುವ ಮಾಹಿತಿಗಳು ಒದಗಬೇಕು. ಉದ್ದಿಷ್ಟ ಚಲನೆ ಆಯಿತೇ ಇಲ್ಲವೇ ಎಂದು ತುಲನೆಮಾಡಿ ಹಾಗೆ ಆಗುವಂತೆ ಕ್ರಮಗೊಳಿಸುವುದೇ ಕಿರಿಮಸ್ತಿಷ್ಕದ ಕ್ರಿಯೆ. ತುಲನೆಗೆ ಬೇಕಾದ ಮಾಹಿತಿಗಳೆರಡೂ. ಇದಕ್ಕೆ ಒದಗುತ್ತವೆ. ಅದರಂತೆ ಇಚ್ಛಿತಕ್ರಿಯೆ ಸಫಲವಾಗಲು ಸಾಧನವಾಗಿದೆ.

	ಲಘುಮಸ್ತಿಷ್ಕದ ಕ್ರಿಯೆ ಕೆಟ್ಟಿದ್ದರೆ ದೇಹದ ಸಮತೋಲ ಕಾಯ್ದುಕೊಳ್ಳುವುದು ಕಷ್ಟ. ಇಚ್ಛಿತ ಕಾರ್ಯವನ್ನು ಸಫಲವಾಗಿ ಮಾಡಲು ಆಗುವುದಿಲ್ಲ. ವಾಸ್ತವವಾಗಿ ಇಂಥ ಲಕ್ಷಣಗಳಿಂದಲೇ ಲಘುಮಸ್ತಿಷ್ಕ ವ್ಯಾಧಿಗ್ರಸ್ತವಾಗಿರಬೇಕು ಎಂದು ನಿರ್ಣಯಿಸಲಾಗುತ್ತದೆ.

	ಲಘುಮಸ್ತಿಷ್ಕ ಭ್ರೂಣದ ಹಿಮ್ಮಿದುಳಿನ (ಹೈಂಡ್ ಬ್ರೈನ್) ಭಾಗವಾಗಿ ವಿಕಸಿಸಿರುವಂತೆಯೇ ಮೆಡ್ಯುಲ (ಮಿದುಳಿನ ಮರ್ಮಭಾಗ-ವೈಟಲ್ ಬಲ್ಬ್) ಮತ್ತು ಸೇತುಗಳಾಗಿಯೂ (ಪಾನ್ಸ್) ವಿಕಸಿಸಿದೆ. ಮೆಡುಲ್ಲ ಮಿದುಳಿನ ಅಂತ್ಯಭಾಗ ಬುರುಡೆಯತಳದ ದೊಡ್ಡರಂಧ್ರದ (ಫೊರಾಮೆನ್ ಮ್ಯಾಗ್‍ನಮ್) ಮೂಲಕ ಬೆನ್ನುಮೂಳೆ ನಾಳದ ಒಳಕ್ಕೆ ಇಳಿದು ಮಿದುಳುಬಳ್ಳಿ ಆಗುತ್ತದೆ. ಇದರ ಮುಂದಿನಭಾಗ ಹಳ್ಳವಾಗಿದ್ದು ಅದಕ್ಕೂ ಮೇಲೆ ಹೊದ್ದಿರುವ ಮಿದುಳು ಪೊರೆಗೂ ನಡುವೆ ಇರುವ ಸ್ಥಳಕ್ಕೆ ಮಿದುಳಿನ ನಾಲ್ಕನೆಯ ಕುಹರ (ಫೋರ್ತ್ ವೆಂಟ್ರಿಕಲ್) ಎಂಬ ಹೆಸರಿದೆ. ಇದು ನಡುಮಿದುಳಿನಲ್ಲಿರುವ ಅಕ್ವಿಡಕ್ಟ್ ಆಫ್ ಸಿಲ್ವಿಯಸ್ಸಿನ ಮೂಲಕ ಮೆದುಳಿನ 3ನೆಯ ಕುಹರದೊಡನೆ ಐಕ್ಯವಾಗುವುದೆಂದು ಹಿಂದೆ ಹೇಳಿದೆ. 4ನೆಯ ಕುಹರ ವಜ್ರಾಕೃತಿಯಂತಿದ್ದು ಅದರ 2 ಪಕ್ಕ ಮೂಲೆಗಳಲ್ಲೂ ಕೆಳಮಧ್ಯದಲ್ಲೂ ರಂಧ್ರಗಳಿವೆ. ಇವಕ್ಕೆ ಅನುಕ್ರಮವಾಗಿ ಲಷ್ಕನ ರಂಧ್ರಗಳು ಮತ್ತು ಮೆಜೆಂಡಿಯ ರಂಧ್ರ ಎಂದು ಹೆಸರು. ಇವುಗಳ ಮೂಲಕ 4ನೆಯ ಕುಹರದಲ್ಲಿರುವ ಮಿದುಳುದ್ರವ ಮಿದುಳುಬಳ್ಳಿಗೂ ಮಿದುಳುಬಳ್ಳಿ ಪೊರೆಗೂ ನಡುವೆ ಇರುವ ಮಿದುಳುಪೊರೆ ದ್ರವದೊಡನೆ ಐಕ್ಯವಾಗಿದೆ. ಅಂದರೆ ಮಿದುಳಿನ ಕುಹರಗಳಲ್ಲಿರುವ ದ್ರವವೇ ಮಿದುಳುಬಳ್ಳಿಯನ್ನೂ ಆವರಿಸಿರುತ್ತದೆ. ಆದ್ದರಿಂದ ಒಟ್ಟಿನಲ್ಲಿ ಈ ದ್ರವವನ್ನು ಮಿದುಳು-ಮಿದುಳುಬಳ್ಳಿದ್ರವ (ಸೆರಿಬ್ರೊಸ್ಟೈನಲ್ ಫ್ಲೊಯಿಡ್) ಎಂದು ಹೆಸರಿಸಲಾಗಿದೆ. ಮೆಡ್ಯುಲದಲ್ಲೂ ಹೊರವಸ್ತುವಿನ ಬಣ್ಣ ಬೂದು ಒಳವಸ್ತುವಿನದು ಬಿಳಿ. ಆದರೆ ಮೆಜೆಂಡಿಯ ರಂಧ್ರವನ್ನು ತೂರಿ ಮಿದುಳುಬಳ್ಳಿ ಆದಾಗ ಅದರಲ್ಲಿ ಬಿಳಿ ವಸ್ತು ಹೊರಗೂ ಬೂದುವಸ್ತು ಒಳಗೂ ಇರುವುದನ್ನು ನೋಡಬಹುದು. ಮೆಡ್ಯುಲದಲ್ಲಿ ಆಲಿವ್ ಎಂಬ ನರಗುಂಬವಿದೆ. ಅಲ್ಲದೆ 8, 9, 10, 11, 12ನೆಯ ತಲೆನರಗಳ ಗುಂಬಗಳೂ ಹಣೆಚರ್ಮಕ್ಕೆ ಪೂರೈಕೆ ಆಗುವ 5ನೆ ತಲೆನರಕ್ಕೆ ಸೇರಿದ ತಂತುಗಳ ಗುಂಬವೂ ಮೆಡ್ಯುಲದ ಒಳಬಿಳೀ ವಸ್ತುವಿನಲ್ಲಿ ಅಡಗಿವೆ.

	ಸೇತು ಮೆಡ್ಯುಲದ ಮೇಲೆ (ಅಗ್ರದಲ್ಲಿ) ಇರುವ ಭಾಗ, ಗುರುಮಸ್ತಿಷ್ಕ ಲಘುಮಸ್ತಿಷ್ಕ ಮತ್ತು ಮಿದುಳುಬಳ್ಳಿಗಳೊಡನೆ ಪರಸ್ಪರ ಸಂಬಂಧ ಕಲ್ಪಿಸುವ ನರತಂತುಗಳ ಕಂತೆಗಳಿಂದಾಗಿದೆ. 6, 7, 8ನೆಯ ತಲೆನರಗಳ ಗುಂಬಗಳೂ ಸೇತುವಿನ ಒಳಗೇ ಇವೆ.	                               			 									
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ